ಅನುಜ್ಞೆ, ಅನುಜ್ಞಾಧಾರಿ
	
ಒಂದು ಸ್ಥಿರ ಆಸ್ತಿಯನ್ನು ನಿರ್ದಿಷ್ಟ ರೀತಿಯಲ್ಲಿ ಉಪಯೋಗಿಸಲು ಅದರ ಒಡೆಯನಿಂದ ಅನುಜ್ಞೆ (ಅನುಮತಿ; ಲೈಸೆನ್ಸ್) ಪಡೆದವ (ಲೈಸೆನ್ಸೀ). ಇಂಡಿಯನ್ ಈಸ್‍ಮೆಂಟ್ಸ್ ಆಕ್ಟ್‍ನ 52ನೆಯ ಸೆಕ್ಷನ್ ಅನುಜ್ಞೆಯ ಅರ್ಥವನ್ನು ನಿರ್ದಿಷ್ಟಪಡಿಸಿದೆ. ಅಂಥ ಅನುಜ್ಞೆಯಿಲ್ಲದೆ ನಡೆಸುವ ಪರಾಸ್ತಿಯ ಅನುಭೋಗ ನ್ಯಾಯಬಾಹಿರವಾಗುತ್ತದೆ. ಇದರಲ್ಲಿ ಆಸ್ತಿಯ ಹಕ್ಕಿನ ಹಸ್ತಾಂತರವಿಲ್ಲ. ಮನೆಗೆ ಬರುವ ಅತಿಥಿ, ನಾಟಕ ಇತ್ಯಾದಿಯನ್ನು ನೋಡಲು ಟಿಕೀಟು ಪಡೆದವ-ಇಂಥವರ ವಿಚಾರದಲ್ಲಿ ಅನುಜ್ಞೆ ವ್ಯಕ್ತರೂಪದಲ್ಲಿರಬಹುದು, ಟಿಕೀಟು ಪಡೆದವ-ಇಂಥವರ ವಿಚಾರದಲ್ಲಿ ಅನುಜ್ಞೆ ವ್ಯಕ್ತರೂಪದಲ್ಲಿರಬಹುದು, ಇಲ್ಲವೆ ಅನುಜ್ಞಾದಾತನ (ಲೈಸೆನ್ಸರ್) ನಡೆವಳಿಕೆಯನ್ನನುಸರಿಸಿ ಅವ್ಯಕ್ತವಾಗಿರಬಹುದು. ಅನುಜ್ಞೆಯ ಮುಖ್ಯ ಅಂಶಗಳೆಂದರೆ, ಅದು ವೈಯಕ್ತಿಕವಾಗಿ ಅನುಗ್ರಹಿಸಲ್ಪಟ್ಟಿದ್ದು ಹಸ್ತಾಂತರ ಮಾಡಲ್ಪಡುವಂಥದಲ್ಲ; ತಾನು ಆಸ್ತಿಯನ್ನು ಉಪಯೋಗಿಸುವುದಕ್ಕೆ ಇನ್ನೊಬ್ಬ ಬಾಧಕ ಮಾಡಿದನೆಂದು ದೂರುವ ಹಕ್ಕು ಅನುಜ್ಞಾಧಾರಿಗಿಲ್ಲ ; ಅನುಜ್ಞೆಕೊಟ್ಟವ ಅಂಥ ಅನುಮತಿಯನ್ನು ರದ್ದು ಮಾಡಬಹುದು; ಅನುಜ್ಞಾದಾತ ಆಸ್ತಿಯನ್ನು ಹಸ್ತಾಂತರಮಾಡಿದರೆ ಕೊಟ್ಟ ಅನುಮತಿ ರದ್ದಾಗುವುದು. ಅನುಜ್ಞಾಧಾರಿಗೆ ತಾನು ಆಸ್ತಿಯನ್ನು ಅನುಭೋಗಿಸುವಾಗ ಅದಕ್ಕೆ ಲಭ್ಯವಾಗಬಹುದಾದ ಆಸ್ತಿವೃದ್ಧಿಯ ಮೇಲೆ ಹಕ್ಕಿರುವುದಿಲ್ಲ. ಅನುಜ್ಞಾದಾತನಿಗೆ ಆಸ್ತಿಯಲ್ಲಿರುವ ಹಕ್ಕಿಗೆ ಅನುಜ್ಞೆ ಒಳಗಾಗಿರಬೇಕು.
	
ವಸತಿಗೃಹ, ಪ್ರವಾಸಿ ಮಂದಿರ, ನಾಟ್ಯಗೃಹ ಮುಂತಾದುವುಗಳಿಗೆ ಪ್ರವೇಶ ಪಡೆಯುವ ವ್ಯಕ್ತಿಗಳು ಕೇವಲ ಅನುಜ್ಞಾಧಾರಿಗಳಾಗಿರುತ್ತಾರೆ. ಒಬ್ಬ ಒಡೆಯ ತನ್ನ ಮನೆಯ ಒಂದು ಭಾಗದಲ್ಲಿರಲು ಒಬ್ಬನಿಗೆ ಅನುಮತಿಕೊಟ್ಟು ಆ ಭಾಗವನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡರೆ ಅಂಥ ಅತಿಥಿ ಅನುಜ್ಞಾಧಾರಿಯಾಗುತ್ತಾನೆ. ಅನುಮತಿ ನೀಡಿಕೆಗೆ ಮೌಲ್ಯವಿರಬಹುದು. ನಾಟ್ಯಗೃಹಪ್ರವೇಶದ ಅನುಮತಿಗೆ ಅವಧಿ ನಿರ್ದಿಷ್ಟವಿರಬಹುದು; ಅನಂತರ ಅನುಜ್ಞೆ ಪಡೆದವನು ಅಲ್ಲಿರಕೂಡದು. ಆದರೆ ಆ ಅವಧಿಯ ಮಧ್ಯೆ ಅವನನ್ನು ಅನುಜ್ಞೆಕೊಟ್ಟವ ಹೊರಗೆ ಹಾಕಲಾರ. ಜಮೀನಿನಲ್ಲಿರುವ ಮರಗಳನ್ನು ಕಡಿಯುವುದೇ ಮುಂತಾದ ಕಾಮಗಾರಿಗಳಿಗೆ ಪಡೆದ ಅನುಮತಿ ಅಂಥ ಕೆಲಸ ಮುಗಿಯುವ ತನಕ ಊರ್ಜಿತದಲ್ಲಿರುತ್ತದೆ. ಅಲ್ಲದೆ, ಆ ಬಗ್ಗೆ ಆ ಜಮೀನಿಗೆ ಹೋಗುವ ಅವ್ಯಕ್ತ ಅನುಜ್ಞೆಯನ್ನು ಅದು ಒಳಗೊಂಡಿರುತ್ತದೆ.
	
ಅನುಜ್ಞಾಧಾರಿ ತನ್ನ ಅನುಮತಿಯನ್ನು ಹಸ್ತಾಂತರ ಮಾಡಕೂಡದೆಂಬ ವಿಧಿಗೆ ಅಪವಾದಗಳಿವೆ. ತದ್ವಿರುದ್ಧ ವ್ಯಕ್ತ ಅಥವಾ ಅವ್ಯಕ್ತ ನಿಷೇಧವಿಲ್ಲದಿದ್ದಲ್ಲಿ, ಸಾರ್ವಜನಿಕ ಮನರಂಜನೆಯ ಜಾಗಕ್ಕೆ ಪ್ರವೇಶಿಸುವ ಅನುಮತಿಯನ್ನು ಹಸ್ತಾಂತರ ಮಾಡಬಹುದು. ಒಬ್ಬನ ಜಮೀನಿನಲ್ಲಿ ಕಾಮಗಾರಿ ನಡೆಸಲು ಅನುಮತಿ ಪಡೆದರೆ, ಅನುಜ್ಞಾಧಾರಿಯ ಕೆಲಸದವರು, ತದ್ವಿರುದ್ಧ ವ್ಯಕ್ತಿ ನಿಷೇಧವಿಲ್ಲದ ಸಂದರ್ಭದಲ್ಲಿ, ಆ ಜಮೀನನ್ನು ಪ್ರವೇಶಿಸಲು ಅವ್ಯಕ್ತಾನುಮತಿ ಪಡೆದವರಾಗುತ್ತಾರೆ.
	
ಅನುಮತಿ ನೀಡಲ್ಪಟ್ಟ ಆಸ್ತಿಯಲ್ಲಿರುವ ಅಥವಾ ಇರಬಹುದಾದ ದೋಷಗಳನ್ನು ದಾತ ಧಾರಿಗೆ ತಿಳಿಸಬೇಕು. ಧಾರಿಯ ಸುರಕ್ಷಿತತೆಗೆ ದಾತ ಜವಾಬ್ದಾರ. ಆದರೆ ಅವ್ಯಕ್ತ ಅನುಮತಿಧಾರಕ ದಾತನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅಪಾಯಕ್ಕೊಳಗಾದರೆ ದಾತ ನಿರ್ದೋಷಿ. ದಾತ ಅನುಜ್ಞೆಗೆ ಸಂಬಂಧಿಸಿದ ಆಸ್ತಿಯಲ್ಲಿ ಧಾರಿಗೆ ಅಥವಾ ಅವನ ಆಸ್ತಿಗೆ ಅಪಾಯವಾಗುವ ಕೃತ್ಯವನ್ನು ಮಾಡಬಾರದು. ಅಪ್ರಾಯಸ್ಥ ಧಾರಿಯನ್ನು ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
	
ಅನುಮತಿಯ ಜೊತೆಗೆ ಸಂಬಂಧಿಸಿದ ಆಸ್ತಿಯನ್ನು ಹಸ್ತಾಂತರ ಮಾಡಿದ್ದರೆ ಅಂಥ ಹಸ್ತಾಂತರದ ಅವಧಿಯ ತನಕ ಅನುಜ್ಞೆ ಊರ್ಜಿತವಿರುತ್ತದೆ. ಧಾರಿ ಅನುಜ್ಞೆಯಂತೆ ಶಾಶ್ವತರೀತಿಯ ಕೆಲಸ ಮಾಡಿದರೆ ಅನುಮತಿಯನ್ನು ರದ್ದುಮಾಡಲಾಗದು. ಅನುಮತಿಯನ್ನು ವ್ಯಕ್ತ ಅಥವಾ ಅವ್ಯಕ್ತ ರೀತಿಯಲ್ಲಿ ಕೊನೆಗೊಳಿಸಬಹುದು. ಅನುಮತಿಗೆ ಸಂಬಂಧಿಸಿದ ಆಸ್ತಿ ನಾಶವಾದಲ್ಲಿ ಅಥವಾ ಶಾಶ್ವತವಾಗಿ ಬದಲಾದಲ್ಲಿ ಧಾರಿ ಅದರ ಒಡೆತನವನ್ನು ಗಳಿಸಿದಲ್ಲಿ, ಅನುಮತಿಯ ಅವಧಿ ಅಥವಾ ಉದ್ದೇಶ ಮುಗಿದಲ್ಲಿ, ಅನುಮತಿಯನ್ನು ಇಪ್ಪತ್ತುವರ್ಷಕಾಲ ನಿರಂತರ ಉಪಯೋಗಿಸದಿದ್ದಲ್ಲಿ ಅದನ್ನು ರದ್ದುಪಡಿಸಲಾಗಿದೆ ಎಂದು ಪರಿಗಣಿಸಬೇಕು. ಅನುಮತಿಗೆ ಸಂಬಂಧಿಸಿದ ಆಸ್ತಿಯಿಂದ ನಿರ್ಗಮಿಸಲು ಮತ್ತು ತನ್ನ ಸ್ವತ್ತುಗಳೇನಾದರೂ ಇದ್ದರೆ ಅವನ್ನು ತೆಗೆದುಕೊಂಡು ಹೋಗಲು ಧಾರಿಗೆ ಯೋಗ್ಯವಾದ ಕಾಲಾವಕಾಶವನ್ನು ದಾತ ಕೊಡಬೇಕು. ಪ್ರತಿಫಲಯುಕ್ತವಾದ ಅನುಮತಿಯಾದರೆ, ಧಾರಿಯ ತಪ್ಪಿಲ್ಲದೆ ಅವನನ್ನು ಹೊರಹಾಕಿದರೆ ದಾತ ಅವನಿಗೆ ಪರಿಹಾರ ತೆರಲು ಬದ್ಧ.
	
ಉತ್ಪಾದನೆ, ಮಾರಾಟ ಮುಂತಾದ ವಿಶಿಷ್ಟಕೃತ್ಯಗಳ ಬಗ್ಗೆ ಆಯಾ ಷರತ್ತುಗಳಿಗೊಳಪಟ್ಟು ಅನುಮತಿಯನ್ನು ನೀಡಲಾಗುತ್ತದೆ.											     
 
(ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ